Sunday, April 28, 2019

ಸ್ವಿಗ್ಗಿ ಡೆಲಿವರಿ ಬಾಯ್ ಮೆಕ್ಯಾನಿಕಲ್ ಇಂಜಿನಿಯರಿಂಗ್


ಈತನ ಹೆಸರು ಮಧು ., ಮಧುಸೂಧನ್ . ನಾಲ್ಕನೇ ಸೆಮಿಸ್ಟರ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ . ಶನಿವಾರ ಮತ್ತು ಭಾನುವಾರ ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಾರೆ . ಶನಿವಾರ ಅಂದರೆ ನಿನ್ನೆ ಸಾಯಂಕಾಲ ಹೀಗೆ ತನ್ನ ಸರದಿಗಾಗಿ ಕಾಯುತ್ತ ಕುಳಿತಿದ್ದಾಗ ನನ್ನ ಕಣ್ಣಿಗೆ ಬಿದ್ದರು . ಹಾಗೆ ಮಾತಾಡಿಸಿದೆ , ಒಂದು ಡೆಲಿವರಿಗೆ ಐವತ್ತು ರೂಪಾಯಿ ಕೊಡುತ್ತಾರಂತೆ . ೧೭ ಡೆಲಿವರಿ ನಂತರ ಮಾಡುವ ಪ್ರತಿ ಡೆಲಿವರಿಗೆ ೧೦೦ ರೂಪಾಯಿ ಕೊಡುತ್ತಾರಂತೆ . ವಾರಾಂತ್ಯದಲ್ಲಿ ೨೫ ಡೆಲಿವರಿ ದಿನಕ್ಕೆ ಅಂದರೆ ಎರಡು ದಿನದಲ್ಲಿ ೫೦ ಜನರಿಗೆ ಆಹಾರ ತಲುಪಿಸುತ್ತಾರೆ . ಹೀಗೆ ಮಾಡುವುದರಿಂದ ಎರಡು ದಿನದಲ್ಲಿ ೩೩೦೦ ರೂಪಾಯಿ ದುಡಿಯುತ್ತಾರಂತೆ . ೪೦೦ ರಿಂದ ೫೦೦ ರೂಪಾಯಿ ಪೆಟ್ರೋಲ್ ಗೆ ಖರ್ಚಾಗುತ್ತಂತೆ . ೨೮೦೦/೨೯೦೦ ಉಳಿಸಿಕೊಳ್ಳಬಹದು ಎಂದಾರತ . ಇಂತಹ ವ್ಯವಸ್ಥೆ ಬಂದು ನಮ್ಮಂತ ಬಡ ವಿದ್ಯಾರ್ಥಿಗಳು ಸ್ವಾಭಿಮಾನದಿಂದ ಬದುಕವಂತಾಗಿದೆ . ಯಾರ ಮುಂದೆಯೂ ಕೈ ಒಡ್ಡಬೇಕಾದ ಪರಿಸ್ಥಿತಿ ಇಲ್ಲ ಎಂದರು ಮಧು . ಓದಿಗೆ ಸಮಯ ಹೇಗೆ ಹೊಂದಿಸಿಕೊಳ್ಳುತ್ತೀರಿ ಎಂದೆ , ಆತ ನಕ್ಕು ಸಾರ್ ಶನಿವಾರ ಮತ್ತು ಭಾನುವಾರ ಮಾತ್ರ ಈ ಕೆಲಸ ಉಳಿದ ಐದು ದಿನ ಇದೆಯಲ್ಲ . ಅಲ್ಲಿ ಇಲ್ಲಿ ಸುತ್ತಿ ಸಮಯ ಕಳೆಯುವ ಬದಲು ಆ ಐದು ದಿನ ಸರಿಯಾಗಿ ಉಪಯೋಗಿಸಿಕೊಂಡರೆ ಸಾಕು ಎಂದರು . ಸರಿ ಫೋಟೋ ಗೆ ಫೋಸ್ ಕೊಡ್ರಿ ಎಂದದ್ದಕ್ಕೆ ' ಫೋಟೋ ತೆಗೆಸಿಕೊಳ್ಳುವಂತ ಕೆಲಸ ಇನ್ನು ಏನು ಮಾಡಿಲ್ಲ ಸಾರ್ ಆ ದಿನ ಬರುತ್ತೆ ಆಗ ನನ್ನ ಮುಖ ಕಾಣುತ್ತೆ ಬಿಡಿ ಈಗ ಬೇಡ ' . ಎಂದರು . ನಾನು ಬಲವಂತ ಮಾಡಲಿಲ್ಲ . ನಾನು ವಿದ್ಯಾರ್ಥಿ ಇದ್ದ ಕಾಲದಲ್ಲಿ ಹಣ ಸಂಪಾದನೆಗೆ ಇಂತಹ ಮಾರ್ಗಗಳು ಇರಲಿಲ್ಲ . ಅಮ್ಮನ ಜೊತೆ ಕೂತು ಮಾವಿನ ಕಾಯಿ ಹೆಚ್ಚಿ ಉಪ್ಪಿನಕಾಯಿ ಹಾಕುವುದು , ಹಪ್ಪಳ , ಸಂಡಿಗೆ , ಬಾಳಕ ಇತ್ಯಾದಿ ತಯಾರಿಸುವುದು ಮತ್ತು ಅದನ್ನ ಮಾರುವುದು , ಪೇಪರ್ ಕವರ್ ಮಾಡಿ ಅದನ್ನ ಮೆಡಿಕಲ್ ಶಾಪ್ ನವರಿಗೆ ಮಾರುವುದು ಹೀಗೆ ನಮಗಿದ್ದ ಆಯ್ಕೆಗಳು ಬಹಳ ಕಡಿಮೆ .ಹಣವೂ ಕಡಿಮೆ . ಇವತ್ತು ಯಾರಾದರೂ ಬಡತನ ಅಂತ ಅಳುತ್ತಾ ಕೊತರೆ ಅದು ಅವರ ಮಾನಸಿಕ ಬಡತನದ ಪ್ರತಿರೂಪವೇ ಹೊರತು ಬೇರೇನಲ್ಲ . #ಮಾಡೋಕ್ಕೆಸಾವಿರಕೆಲಸವಿದೆ ಶುಭವಾಗಲಿ .